ಟೆರಟೋಮ
ಭ್ರೂಣಾವಸ್ಥೆಯ ತ್ರಿಪದರಗಳಲ್ಲಿ ಎರಡು ಅಥವಾ ಮೂರು ಪದರಗಳಿಂದ ಉದ್ಭವಿಸಿದ ಅರ್ಬುದ. ಇತರ ದುರ್ಮಾಂಸಗಳಂತೆ ಅನಿರ್ದಿಷ್ಟವಾಗಿ ಬೆಳೆದದ್ದಲ್ಲ; ಬದಲು ವ್ಯಕ್ತಿಯ ಅಂಗದೊಳಗೆ ಇನ್ನೊಂದು ವ್ಯಕ್ತಿ ರೂಪಗೊಳ್ಳುವ ಪ್ರಯತ್ನವಾಗೆ ಬೆಳೆದುದು. ಏಡಿಗಂತಿಯಂತೆ (ಕ್ಯಾನ್ಸರ್) ಮಾರಕಸ್ಥಿಯದಲ್ಲ. ಆದರೆ ಅರ್ಬುದದಲ್ಲಿಯೇ (ಟ್ಯೂಮರ್) ಏಡಿಗಂತಿ ಉಂಟಾಗಬಹುದು. ಅದು ಕಾರ್ಸಿನೋಮ ಅಥವಾ ಸಾರ್ಕೋಮ ಯಾವುದಾದರೂ ಆಗಿರಬಹುದು. ಟೆರಟೋಮ ಭ್ರೂಣದಂತೆ ಸಹಜರೀತಿಯಲ್ಲಿ ವೃದ್ಧಿಸಿ ಗುಂಡಿಗೆ ಇರದ ಒಂದು ಶಿಶುವಿನಂತೆ ರೂಪಗೊಂಡು ಆತಿಥೇಯ ಶಿಶುವಿನ ದೇಹದೊಳಗೆ ಯಾವುದೋ ಅಂಗಕ್ಕೆ ಅಂಟಿಕೊಂಡಿರುವ ಪರಾವಲಂಬಿ ಜೀವಿಯಾಗಿರಬಹುದು. ಇಲ್ಲವೇ ಯದ್ವಾತದ್ವಾ ಜೋಡಣೆಗೊಂಡ ಅನೇಕ ಅಂಗಗಳ ಸಮೂಹವಾದ ಅರ್ಬುದವಾಗಿ ಮೇಲ್ದವಡೆಗೋ ಬೆನ್ನಿನ ಕೆಳಭಾಗದ ಮಧ್ಯಕ್ಕೋ ನೇತುಬಿದ್ದಿರಬಹುದು. ಅಂಥದೇ ಅರ್ಬುದ ಅಂಡಾಶಯ ವೃಷಣಗಳೊಳಗೂ ಕಂಡುಬರಬಹುದು. ಒಂದು ಅಥವಾ ಎರಡು. ಅಂಗ, ಅಂಗಾಂಶಗಳು ಮಾತ್ರವಿರುವ ಸರಳರಚನೆಯ ಟೆರಟೋಮ ಮೂತ್ರಪಿಂಡದೊಳಗೆ ಕಾಣಬರುತ್ತದೆ; ಇಲ್ಲವೆ ಚರ್ಮದ ಒಳಗೆ ಹುದುಗಿಕೊಂಡಿದ್ದು ವೃದ್ಧಿಸಿದ ಬಳಿಕ ಗಂಟಿನಂತಿರುವ ಡರ್ಮಾಯ್ಡ್‍ಗಳಾಗಿ ಕಾಣಬರುತ್ತದೆ. ಟೆರಟೋಮ ಒಳಗೆ ಸ್ಥಳಾವಕಾಶವಿಲ್ಲದ ಗಡಸುಗಂಟಾಗಿರಬಹುದು. ಇಲ್ಲವೆ ಒಳಗೆ ಟೊಳ್ಳಾಗಿರುವ ಗಂಟಾಗಿರಬಹುದು. ಕ್ರಮವಾಗಿ ರೂಪಗೊಳ್ಳದಿರುವ ಟೆರಟೋಮದಲ್ಲಿ ಚರ್ಮ, ನರಕೋಶಹುರಿಗಳು, ಕೂದಲು, ಮೂಳೆ, ಹಲ್ಲು, ಮೃದ್ವಸ್ಥಿ, ಸ್ನಾಯುಗಳು, ಗ್ರಂಥಿಗಳು-ಇವೆಲ್ಲ ಗಜಿಬಿಜಿಯಾಗಿ ಜೋಡಿಸಲ್ಪಟ್ಟಿರಬಹುದು. ಟೆರಟೋಮವಿರುವ ಸ್ಥಳದಲ್ಲಿ ಈ ಅಂಗಗಳು ನೈಸರ್ಗಿಕವಾಗಿ ಇರುವುದಿಲ್ಲವೆಂಬುದು ಸ್ಪಷ್ಟ.

	ಅಂಡಾಣುವಿನ ನಿಷೇಚನವಾದ ತರುವಾಯ ಅದು ಭ್ರೂಣಾಣುವಾಗಿ ಅನಂತರ ವೃದ್ಧಿಗೊಂಡು ಭ್ರೂಣವಾಗುವುದಷ್ಟೆ. ಭ್ರೂಣಾಣು ಒಡೆದು 2,4,8 ಇತ್ಯಾದಿ ಕೋಶಗಳಾಗಿ ವೃದ್ಧಿಯಾಗುತ್ತಿರುವ ಪ್ರಾರಂಭಿಕ ಕಾಲದಲ್ಲಿ ಯಾವುದೋ ಕೋಶ ಸ್ಥಳಪಲ್ಲಟಗೊಳ್ಳುವುದೇ ಟೆರಟೋಮಕ್ಕೆ ಕಾರಣ. ಈ ಹಂತದಲ್ಲಿ ಸ್ಥಳ ಪಲ್ಲಟಗೊಂಡು ಕೋಶಕ್ಕೆ ವ್ಯವಸ್ಥಿತ ರೀತಿಯಲ್ಲಿ ಇನ್ನೊಂದು ಭ್ರೂಣವಾಗಿಯೇ ಬೆಳೆಯುವ ಸಾಮಥ್ರ್ಯವಿರುತ್ತದೆ. ಭ್ರೂಣದ ಬೆಳೆವಣಿಗೆ ಇನ್ನೂ ಸ್ವಲ್ಪ ಮುಂದುವರೆದ ಬಳಿಕ ಸ್ಥಾನಪಲ್ಲಟಗೊಳ್ಳುವ ಕೋಶಕ್ಕೆ ಎಲ್ಲ ಅಂಗಗಳಾಗಿ ಬೆಳೆಯುವ ಸಾಮಥ್ರ್ಯವಿದ್ದರೂ ವಿತರಣೆ ಇಲ್ಲದೆ ಅಡ್ಡಾದಿಡ್ಡಿಯಾಗಿರುವ ಅಂಗಸಮೂಹವಾಗುತ್ತದೆ. ಸಾಮಾನ್ಯವಾಗಿ ಟೆರಟೋಮ ಅಂಡಾಶಯ ವೃಷಣಗಳಲ್ಲಿಯೂ ಕಾಣಬರುವುದು. ಮಿದುಳು ಎದೆಮಧ್ಯ, ಬೆನ್ನು ಭಿತ್ತಿಯ ಒಳಗೆ-ಈ ಸ್ಥಳಗಳಲ್ಲಿಯೂ ಟೆರಟೋಮ ಸಾಮಾನ್ಯ. ಅಂಡಾಶಯದಲ್ಲಿರುವ ಟೆರಟೋಮ ಸಾಧಾರಣವಾಗಿ ನಿರುಪದ್ರವಿ. ಬಹುಕಾಲ ಇದು ಗಾತ್ರವೃದ್ಧಿಯನ್ನು ತೋರಿಸಬಹುದು. ಇಲ್ಲವೇ ಒಳಗೆ ಟೊಳ್ಳು ಉಂಟಾಗಿ ಸ್ಥಳಾವಕಾಶ ಹೆಚ್ಚುತ್ತ ಸ್ವಲ್ಪ ದಪ್ಪವಾಗಬಹುದು. ವೃಷಣದ ಟೆರಟೋಮ ಏಡಿಗಂತಿಯಾಗಿ ಮಾರ್ಪಡುವುದು ಸಾಮಾನ್ಯ, ಟೆರಟೋಮಕ್ಕೆ ಚಿಕಿತ್ಸೆ ಶಸ್ತ್ರಕ್ರಿಯೆಯಿಂದ ಅದನ್ನು ತೆಗೆದುಹಾಕುವುದೇ. ನಿರ್ದಿಷ್ಟ ಸಂದರ್ಭಗಳಲ್ಲಿ ಎಕ್ಸ್‍ಕಿರಣ ವಿಕಿರಣತೆಗಳಿಗೆ ಒಳಪಡಿಸಿ ಚಿಕಿತ್ಸಿಸುವುದೂ ಉಂಟು.
(ಆರ್.ಎಚ್.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ